ಪ್ರಾಂಶುಪಾಲರ ಸಂದೇಶ



“ಲೋಕದಲ್ಲಿ ಹಲವು ಸಮರ್ಥ ಮಹಿಳೆಯರಿದ್ದಾರೆ ಮತ್ತು ಅವರ ಪೈಕಿ ನಾವೂ ಸಹ ಒಬ್ಬರಾಗಿದ್ದೇವೆ” – ಪ್ರೋವರ್ಬ್ಸ್ ೩೧:೨೯

ಈ ಪ್ರಪಂಚದಲ್ಲಿ ಭವಿಷ್ಯದ ನಾಗರಿಕರನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಹೆಣ್ಣುಮಕ್ಕಳಲ್ಲಿ ಜ್ಞಾನ, ಕೌಶಲ್ಯ ಹಾಗೂ ನೈತಿಕತೆಯನ್ನು ಬೆಳೆಸುವಲ್ಲಿ ಸುಮಾರು ೫೦ಕ್ಕೂ ಹೆಚ್ಚು ವರ್ಷಗಳ ಅನುಭವವುಳ್ಳ ಜ್ಯೋತಿನಿವಾಸ್‌ ಕಾಲೇಜ್‌ ಸ್ವಾಯತ್ತ ಸಂಸ್ಥೆಯು ಆ ಜವಾಬ್ದಾರಿಯನ್ನು ಎಂದಿಗೂ ಸಮರ್ಥವಾಗಿ ನಿಭಾಯಿಸುತ್ತ ಬಂದಿದೆ. ಸಿಸ್ಟರ್ಸ್‌ ಆಫ್‌ ಸೆಂಟ್‌ ಜೋಸೆಫ್‌ ಆಫ್‌ ತಾರ್ಬ್ಸ್ನಿಂದ ೧೯೬೬ರಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್‌ ಕಾಲೇಜ್ ಆಗಿ ಸ್ಥಾಪನೆಗೊಂಡ ಜೆಎನ್‌ಸಿ ಕಾಲೇಜು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಸಮತೋಲಿತವೂ ಸಮಗ್ರವೂ ಆದ ಶಿಕ್ಷಣವನ್ನು ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿದೆ.

ಮಹಿಳಾ ಶಿಕ್ಷಣವು ಮಹಿಳಾ ಸಬಲೀಕರಣಕ್ಕೆ ಪೂರಕವಾದುದಾಗಿದೆ. ಮಹಿಳಾ ಕಾಲೇಜ್‌ ಆದ ಜೆಎನ್‌ಸಿಯ ಮುಖ್ಯ ಆಶಯ ನಮ್ಮ ವಿದ್ಯಾರ್ಥಿನಿಯರ ಸಬಲೀಕರಣವಾಗಿದೆ. ಹಲವು ಹಿನ್ನೆಲೆಯುಳ್ಳ, ವಿವಿಧ ಕೌಶಲ್ಯ, ಪ್ರತಿಭೆಯುಳ್ಳ ವಿದ್ಯಾರ್ಥಿನಿಯರನ್ನು ಒಳಗೊಂಡ ನಮ್ಮ ಕಾಲೇಜು ಸಮಾನತೆ, ಒಳಗೊಳ್ಳುವಿಕೆಗಳಿಗೆ ಪ್ರಾಮುಖ್ಯ ನೀಡಿದ್ದು ಆ ಎಲ್ಲ ವೈವಿಧ್ಯಗಳನ್ನೂ ಪೋಷಿಸುವ ಗುರಿ ಹೊಂದಿದೆ. ತನ್ನ ಬದ್ಧತೆ, ಪ್ರಾವೀಣ್ಯ, ಸೇವೆ ಹಾಗೂ ಪ್ರಸ್ತುತತೆಗಳ ವಿಷಯದಲ್ಲಿ ನಮ್ಮ ಸಂಸ್ಥೆಯು ಸುದೀರ್ಘ ಇತಿಹಾಸ ಹೊಂದಿದ್ದು ಈ ಸಂಬಂಧವಾಗಿ ನಮ್ಮ ಸಂಸ್ಥೆಯು ಕಾಲಕಾಲಕ್ಕೆ ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗಿದೆ. ಪ್ರಶಸ್ತಿ, ಪುರಸ್ಕಾರಗಳಿಗಿಂತಲೂ ಮಿಗಿಲಾಗಿ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ನಾವು ಸಾಧಿಸಿರುವ ಹಲವು ಮೈಲಿಗಲ್ಲುಗಳು ಹಾಗೂ ಹೊಂದಿರುವ ವಿಶೇಷ ಕಾಳಜಿಗಳಿಂದಾಗಿ ನಮ್ಮ ಸಂಸ್ಥೆ ಮೌಲ್ಯಯುತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ವಿದ್ಯಾರ್ಥನಿಯರು ನಮ್ಮ ಸಂಸ್ಥೆಯಲ್ಲಿ ಕಲಿಯುವ ಅವಧಿಯಲ್ಲಿ ಅವರ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನ ಬೆಳವಣಿಗೆಯಲ್ಲಿ ನಾವು ಕಂಡಿರುವ ಬದಲಾವಣೆಗಳು ನಿಜಕ್ಕೂ ಸಂತೃಪ್ತಿ ಕೊಡುವ ಸಂಗತಿಯಾಗಿದೆ.

ಭಗವಂತನಲ್ಲಿ ನಾವು ಹೊಂದಿರುವ ಶ್ರದ್ಧೆ ನಮ್ಮೆಲ್ಲ ಮೌಲ್ಯಗಳ ಕೇಂದ್ರ ಮೌಲ್ಯವಾಗಿದೆ. ಈ ಶ್ರದ್ಧೆಯಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ಕಾಣುತ್ತೇವೆ ಮತ್ತು ಈ ಶ್ರದ್ಧೆಯೇ ಅಗೋಚರವಾದುದನ್ನು ನಮಗೆ ಖಾತರಿ ಪಡಿಸುತ್ತದೆ. ಪರಿಶ್ರಮ ಹಾಗೂ ತೀವ್ರ ಶ್ರದ್ಧೆಯೇ ನಮ್ಮ ಈ ಕಾಲೇಜಿನ ಅಡಿಗಲ್ಲಾಗಿದೆ. ಈ ಅದ್ಭುತ ಸಂಸ್ಥೆಯನ್ನು ನಿರ್ಮಿಸುವಲ್ಲಿ ಅವಿಶ್ರಾಂತವಾಗಿ ದುಡಿದಿರುವ ನಮ್ಮ ಸೋದರಿಯರು ಹಾಗೂ ಸಿಬ್ಬಂದಿಗೆ ನಾನು ಆಭಾರಿಯಾಗಿದ್ದೇನೆ. ಇಂತಹುದೊಂದು ಸಂಸ್ಥೆಯನ್ನು ಮುಂದಕ್ಕೆ ಕರೆದೊಯ್ಯಬೇಕಾದ ಹೊಣೆಗಾರಿಕೆ ಇಂದು ನಮ್ಮ ಮೇಲಿದೆ. ಪರಿವರ್ತನೆಯ ಈ ಯುಗದಲ್ಲಿ ನಮ್ಮ ಪಾಲಿನ ಭಗವಂತನ ಮೇಲಿನ ಅವಿಚಲಿತ ಶ್ರದ್ಧೆಯೊಂದಿಗೆ ಅಜ್ಞಾತವಾದ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದ್ದೇವೆ. ನಾವು ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುವುದನ್ನು, ಪ್ರತಿಯೊಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದನ್ನು, ಕ್ಷಮಿಸುವುದನ್ನು, ಸ್ವೀಕರಿಸುವುದನ್ನು ಕಲಿಯುವಂತಾಗಲಿ ಹಾಗೂ ಪ್ರತಿಯೊಬ್ಬರ ವಿಶಿಷ್ಟತೆಯನ್ನು ಗೌರವಿಸುವಂತಾಗಲಿ ಮತ್ತು ಒಬ್ಬರೊಂದಿಗೆ ಒಬ್ಬರು ಬಾಳ್ವೆ ಮಾಡಲು ಅನುವು ಮಾಡಿಕೊಟ್ಟಿರುವ ಈ ಅಮೂಲ್ಯವಾದ ಬದುಕನ್ನು ಸಂಭ್ರಮಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.

ನನ್ನ ಆತ್ಮೀಯ ಸಿಬ್ಬಂದಿ ಸಹೋದ್ಯೋಗಿಗಳೇ ಹಾಗೂ ವಿದ್ಯಾರ್ಥಿನಿಯರೇ, ಭಗವಂತ ನಮಗೆ ಕರುಣೆ ತೋರಿಸಲಿ, ಅವನ ಬೆಳಕೇ ನಮಗೆ ದಾರಿದೀಪವಾಗಲಿ. ಅವನು ನಮ್ಮೊಳಗೆ ಭರವಸೆಯ ಜ್ಯೋತಿಯನ್ನು ಬೆಳಗಿಸಲಿ. ಭಗವಂತನ ಮೇಲಿನ, ಆತ್ಮದ ಮೇಲಿನ ಮತ್ತು ಸಮಸ್ತ ಮನುಕುಲದ ಮೇಲಿನ ಆಳವಾದ ಶ್ರದ್ಧೆ ನಮ್ಮೊಳಗಿನ ಮಾನವತ್ವವನ್ನು ಜಾಗೃತಗೊಳಿಸಲಿ. ಆ ಮೂಲಕ ನಾವು ಧೀಮಂತಿಕೆ ಹಾಗೂ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡ ಸಂವೇದನಾಶೀಲ ನಾಗರಿಕರಾಗುವಂತಾಗಲಿ, ಧ್ವನಿಯಿಲ್ಲದವರ ಪಾಲಿನ ಧ್ವನಿಯಾಗುವಂತಾಗಲಿ, ಒಂದು ಪರಿಣಾಮಕಾರೀ ಪರಿವರ್ತನೆ ತರುವಂತಾಗಲಿ. ನಮ್ಮಲ್ಲಿರುವುದನ್ನು ಹಂಚಿಕೊಂಡು ಬಾಳುವಂತೆ ಆ ಭಗವಂತ ನಮಗೆ ಉದಾರ ಹೃದಯವನ್ನು ಕರುಣಿಸಲಿ; ಶಾಂತಿ, ಸಾಮರಸ್ಯದಿಂದ ಬದುಕುವಂತಾಗಲಿ. ಬದ್ಧತೆಯುಳ್ಳ, ಸಬಲೀಕರಣಗೊಳಿಸಲೆಂದೇ ಸಬಲರಾಗಿರುವ, ಮಹಿಳೆಯರನ್ನು ಹೊಂದಿರುವ ಒಂದು ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯವನ್ನು ಅವನು ನಮಗೆ ನೀಡಲಿ. ಶಾಲೋಮ್‌, ಶಾಲೋಮ್!!!

ಶಿಕ್ಷಣವೆಂಬುದು ಬೆಲೆಕಟ್ಟಲಾಗದ ಸಂಪತ್ತು ಎಂಬುದನ್ನು ನಾವು ಮರೆಯದಿರೋಣ. ಬೆಳಕು ಹಾಗೂ ಜ್ಞಾನದ ಈ ನೆಲೆವೀಡಿನಲ್ಲಿ ಬದುಕುತ್ತಿರುವ ನಾವು ಮತ್ತು ನೀವು ಕೃತಾರ್ಥರಾಗಿದ್ದೇವೆ. ಇಂತಹುದೊಂದು ಸ್ಥಳದಿಂದ ರೂಪುಗೊಳ್ಳಬಹುದಾದ ನಮ್ಮ ರಾಷ್ಟ್ರ ಹಾಗೂ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆ ನಮಗಿದೆ ಎಂಬುದನ್ನು ನಾವು ಮನಗಾಣುವಂತಾಗಲಿ.

ನಮ್ಮ ಅಂತರಂಗದ ಜ್ಯೋತಿಯನ್ನು ಬೆಳಗಿಸಿಕೊಳ್ಳಲು ಸನ್ನದ್ಧವಾಗಿರುವ ನಮ್ಮ ಮೇಲೆ ಭಗವಂತನ ಅನುಗ್ರಹವಿರಲಿ

ಡಾ.ಸಿ. ಮೇರಿ ಲೂಯಿಸಾ ಎಸ್
ಪ್ರಾಂಶುಪಾಲರು

Jyoti Nivas College Autonomous, BANGALORE

© 2019 eÉJ£ï¹. J¯Áè ºÀPÀÄÌUÀ¼À£ÀÄß PÁ¬ÄÝj¸À¯ÁVzÉ.